ತಾಪಸ್ಥಾಪಿ
	ತಪನದ ಮತ್ತು ಶೀತಲನದ ಒಂದು ಯಾ ಹೆಚ್ಚು ಮೂಲಗಳನ್ನೂ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ನಿಯಂತ್ರಿಸಿ ಅಪೇಕ್ಷಿತ ಉಷ್ಣತೆಯನ್ನು ಕಾಯ್ದಿರಿಸಬಲ್ಲ ಒಂದು ಉಪಕರಣ (ಥರ್ಮೋಸ್ಪ್ಯಾಟ್). ಅಂದರೆ ಇದು ಯಾವುದೇ ವ್ಯವಸ್ಥೆಯಲ್ಲಿ ನಿಯತ ಉಷ್ಣತೆಯನ್ನು ಸಂರಕ್ಷಿಸಲು ಅಳವಡಿಸುವ ಒಂದು ಸಲಕರಣೆ. ವ್ಯವಸ್ಥೆಯಲ್ಲಿನ ವಸ್ತು ಘನ, ದ್ರವ ಅಥವಾ ಅನಿಲ ರೂಪದಲ್ಲಿ ಇರಬಹುದು. ಅದರ ಉಷ್ಣತೆ ಅವಶ್ಯಕತೆಗಿಂತ ಹೆಚ್ಚಾದಾಗ ಉಷ್ಣದ ಪೂರೈಕೆಯನ್ನು ಕಡಿದು ಕಡಿಮೆಯಾದಾಗ ಸರಬರಾಜು ಸ್ಥಾಪಿತವಾಗುವಂತೆ ತಾಪಸ್ಥಾಪಿ ನಿಯಂತ್ರಿಸುತ್ತದೆ. ಉಷ್ಣತೆಯ ವ್ಯತ್ಯಾಸದಿಂದ ವಸ್ತುಗಳಲ್ಲಿ ಉಂಟಾಗುವ ಭೌತ ಬದಲಾವಣೆ ಅಥವಾ ರೋಧದ ಬದಲಾವಣೆ ತತ್ತ್ವವನ್ನು ಆಧರಿಸಿ ತಾಪಸ್ಥಾಪಿಗಳನ್ನು ರಚಿಸುವುದು ವಾಡಿಕೆ. 

	ತಾಪಸ್ಥಾಪಿಯಲ್ಲಿ ಮೂಲತಃ ಎರಡು ಅಂಗಗಳಿವೆ : 1 ಗ್ರಾಹ್ಯಾಂಗ (ಸೆನ್ಸಿಂಗ್ ಪಾರ್ಟ್). 2 ನಿಯಂತ್ರಣಾಂಗ, ಗ್ರಾಹ್ಯಾಂಗದಲ್ಲಿನ ವಸ್ತು ಉಷ್ಣತೆಯ ವ್ಯತ್ಯಾಸವನ್ನು ಗ್ರಹಿಸಿ ಅದರ ಭೌತರೂಪದಲ್ಲಿ ಇಲ್ಲವೇ ವಿದ್ಯುತ್ ರೋಧದಲ್ಲಿ ಬದಲಾವಣೆ ಉಂಟುಮಾಡುತ್ತದೆ. ಗ್ರಾಹ್ಯ ವಸ್ತುವಿನ ಈ ಕ್ರಿಯೆಯನ್ನು ಗ್ರಹಿಸಿದ ನಿಯಂತ್ರಣಾಂಗದ ವಸ್ತುವು ಕವಾಟ ಅಥವಾ ವಿದ್ಯುತ್ ಸ್ವಿಚ್ಚನ್ನು ನಿಯಂತ್ರಿಸುತ್ತದೆ. 

	ಸಾಮಾನ್ಯವಾಗಿ ಮೂರು ತಾಪಸ್ಥಾಪಿಗಳು ಬಳಕೆಯಲ್ಲಿವೆ : 1 ದ್ವಿಲೋಹ ಪಟ್ಟಿ (ಸುರುಳಿ) ತಾಪಸ್ಥಾಪಿ. 2 ದ್ರವ ತಾಪಸ್ಥಾಪಿ. 3 ಎಲೆಕ್ಟ್ರಾನಿಕ್ ತಾಪಸ್ಥಾಪಿ. 

	1 ದ್ವಿಲೋಹ ಪಟ್ಟಿ ತಾಪಸ್ಥಾಪಿ : ಎರಡು ಬೇರೆ ಬೇರೆ ಲೋಹಗಳ ಪಟ್ಟಿಗಳನ್ನು ಅವುಗಳ ಎರಡು ತುದಿ ಂ ಮತ್ತು ಃ ಗಳಲ್ಲಿ ಒಂದನ್ನೊಂದು ಸೇರಿಸಿ ಭದ್ರವಾಗಿ ಬೆಸುಗೆ ಹಾಕಿದೆ (ಚಿತ್ರ 1) . 

ಚಿತ್ರ-1

ಇವುಗಳ ಪೈಕಿ ಒಂದು ಹೆಚ್ಚು ವ್ಯಾಕೋಚನ ಗುಣಾಂಕವಿರುವ (ಹಿತ್ತಾಳೆ) ಪಟ್ಟಿ ಮತ್ತೊಂದು ಅತಿ ಕಡಿಮೆ ವ್ಯಾಕೋಚನ ಗುಣಾಂಕವಿರುವ (ಇನ್ ವಾರ್ ಮಿಶ್ರಲೋಹ) ಪಟ್ಟಿ. ಒಂದು ವ್ಯವಸ್ಥೆಗೆ ವಿದ್ಯುತ್ ಒಲೆಯಿಂದ ಉಷ್ಣವನ್ನು ಒದಗಿಸುತ್ತಿದ್ದು ಆ ಒಲೆಗೆ ಂ,ಃ,ಅ ಮೂಲಕ ವಿದ್ಯುತ್ತನ್ನು ಸರಬರಾಜು ಮಾಡಲಾಗುವುದು. ಃ ಮತ್ತು ಅ ಸಂಪರ್ಕವಿರುವ ತನಕ ವಿದ್ಯುತ್ತು ಹರಿಯುವುದರಿಂದ ವಿದ್ಯುತ್ ಒಲೆ ವ್ಯವಸ್ಥೆಗೆ ಉಷ್ಣವನ್ನು ನೀಡುತ್ತದೆ. ಉಷ್ಣತೆ ಹೆಚ್ಚುತ್ತ ಹೋಗುತ್ತದೆ. ಜೊತೆಯಲ್ಲಿಯೇ ದ್ವಿಲೋಹ ಪಟ್ಟಿಯ ಉಷ್ಣತೆ ಹೆಚ್ಚಿದಾಗ ವ್ಯಾಕೋಚನ ಗುಣಾಂಕದಲ್ಲಿ ವ್ಯತ್ಯಾಸವಿರುವ ಪಟ್ಟಿಗಳು ಬೇರೆ ಬೇರೆ ಪರಿಮಾಣಗಳಲ್ಲಿ ವ್ಯಾಕೋಚಿಸುತ್ತವೆ. ಎರಡು ಪಟ್ಟಿಗಳನ್ನು ತುದಿಗಳಲ್ಲಿ ಬೆಸುಗೆಯ ಮೂಲಕ ಭದ್ರಪಡಿಸಿರುವುದರಿಂದ ವ್ಯಾಕೋಚನ ವ್ಯತ್ಯಾಸವನ್ನು ಸರಿದೂಗಿಸಲು ಪಟ್ಟಿ ಮೇಲೆ ಬಾಗಿ ಃ ಮತ್ತು ಅ ಗಳಿಗಿರುವ ಸಂಪರ್ಕವನ್ನು ಕಡಿಯುತ್ತದೆ. ಒಲೆಗೆ ವಿದ್ಯುತ್ ಸರಬರಾಜು ನಿಲ್ಲುವುದರಿಂದ ಒಲೆ ಆರಿ ವ್ಯವಸ್ಥೆಯ ಉಷ್ಣತೆ ಕಡಿಮೆಯಾಗುತ್ತ ಹೋಗುತ್ತದೆ. ಆಗ ಪಟ್ಟಿಯೂ ಕುಗ್ಗಿ ಃ ಮತ್ತು ಅ ಗಳ ನಡುವೆ ಪುನಃ ಸಂಪರ್ಕ ಕಲ್ಪಿಸುತ್ತದೆ ಮತ್ತು ವಿದ್ಯುತ್ ಒಲೆ ಹೊತ್ತಿಕೊಳ್ಳುತ್ತದೆ. ಪುನಃ ವ್ಯವಸ್ಥೆಯ ಉಷ್ಣತೆ ಏರಿದಾಗ ಃ ಮತ್ತು ಅ ಗಳ ಸಂಪರ್ಕ ಕಡಿಯುತ್ತದೆ. ಹೀಗೆ ಅವಶ್ಯಕತೆಗಿಂತ 1o ಉಷ್ಣತೆ ಕಡಿಮೆ ಅಥವಾ ಹೆಚ್ಚಾದಾಗ ವಿದ್ಯುನ್ಮಂಡಲ ಪೂರ್ಣವಾಗಿ ಅಥವಾ ಕಡಿದು ವ್ಯವಸ್ಥೆಯ ಉಷ್ಣತೆ ನಿಯಂತ್ರಿಸಲ್ಪಡುತ್ತದೆ. ದ್ವಿಲೋಹ ಪಟ್ಟಿ ತಾಪಸ್ಥಾಪಿಗಳಲ್ಲಿ ಗ್ರಾಹ್ಯ ಹಾಗೂ ನಿಯಂತ್ರಣ ವಸ್ತು ದ್ವಿಲೋಹ ಪಟ್ಟಿಯೇ, ಪಟ್ಟಿಯನ್ನು ಸುರುಳಿಯಂತೆ ಸುತ್ತಿ ಬಳಸುವುದು ಹೆಚ್ಚು ರೂಢಿಯಲ್ಲಿದೆ. ಉಷ್ಣತೆಯ ವ್ಯತ್ಯಾಸದಿಂದ ಸುರುಳಿ ಸುತ್ತಿಕೊಂಡು ಅಥವಾ ತೆರೆದುಕೊಂಡು ಕಾರ್ಯನಿರ್ವಹಿಸುತ್ತದೆ. ಈ ಸಲಕರಣೆಯನ್ನು 0o ಅ ಯಿಂದ 400oಅ ವರೆಗೆ ಬಳಸಬಹುದು. 

	2 ದ್ರವ ತಾಪಸ್ಥಾಪಿ: ಘನವಸ್ತುಗಳ ವ್ಯಾಕೋಚನ ತತ್ತ್ವವನ್ನು ಆಧರಿಸಿ ತಾಪಸ್ಥಾಪಿಗಳನ್ನು ರಚಿಸಿರುವಂತೆ ದ್ರವಗಳ ವ್ಯಾಕೋಚನ ತತ್ತ್ವವನ್ನೂ ಆಧರಿಸಿ ದ್ರವ ತಾಪಸ್ಥಾಪಿಯನ್ನು ರಚಿಸಿದೆ. ಅಂಥ ತಾಪಸ್ಥಾಪಿಗ¼ ಒಂದು ಮಾದರಿಯನ್ನು ಚಿತ್ರ (2) ರಲ್ಲಿ ಕಾಣಬಹುದು. ಖಿ ಉದ್ದವಾದ ಒಂದು ಬುರುಡೆ. ಹೆಚ್ಚು ವ್ಯಾಕೋಚನ ಗುಣಾಂಕವಿರುವ ದ್ರವವನ್ನು (ಟಾಲೀನ್) ಇದರೊಳಗೆ ತುಂಬಿದೆ. ಈ ಬುರುಡೆಗೂ ತಿದಿ ಖ ಗೂ ಲೋಮನಾಳದ ಮೂಲಕ ಸಂಪರ್ಕ ಕಲ್ಪಿಸಿದೆ. ತಿದಿಯ ಕೆಳಭಾಗದಲ್ಲಿ ಸ್ಪ್ರಿಂಗ್ ಅಳವಡಿಸಿದ ನಿಯಂತ್ರಣ ದಂಡ S ಅನ್ನು ಭದ್ರಪಡಿಸಿದೆ. ಯಾವ ವ್ಯವಸ್ಥೆಯ ಉಷ್ಣತೆಯನ್ನು ನಿಯತವಾಗಿ ಇಡಬೇಕೋ ಅದರೊಳಗೆ ಖಿ ಮುಳುಗಿರುತ್ತದೆ. ವ್ಯವಸ್ಥೆಗೆ ಶಾಖವನ್ನು ಒದಗಿಸಿದಾಗ ಬುರುಡೆಯಲ್ಲಿರುವ ದ್ರವ ವ್ಯಾಕೋಚಿಸುತ್ತದೆ. 

 	ಇದು ತಿದಿಯ ಮೇಲೆ ಒತ್ತಡವನ್ನು ಒಡ್ಡಿ, ನಿಯಂತ್ರಣ ದಂಡ ಕೆಳಚಲಿಸುವಂತೆ ಮಾಡುತ್ತದೆ. ಕೆಳಚಲಿಸಿದ ಈ ನಿಯಂತ್ರಣ ದಂಡ ಅನಿಲಕ ಜ್ವಾಲಕಕ್ಕೆ ಅನಿಲದ ಸರಬರಾಜನ್ನು ನಿಲ್ಲಿಸಬಹುದು ಅಥವಾ ವಿದ್ಯುತ್ ಒಲೆಗೆ ವಿದ್ಯುತ್ ಪೂರೈಕೆಯನ್ನು ಕಡಿದು ಹಾಕಬಹುದು. ಅಂತೂ ಉಷ್ಣ ಪೂರೈಕೆ ನಿಂತು, ವ್ಯವಸ್ಥೆಯ ಉಷ್ಣತೆ ಕಡಿಮೆಯಾಗುತ್ತ ಹೋಗುತ್ತದೆ. ಇದರ ಜೊತೆಯಲ್ಲಿಯೇ ಬುರುಡೆಯಲ್ಲಿರುವ ದ್ರವವೂ ಕುಗ್ಗುವುದರಿಂದ ನಿಯಂತ್ರಣ ದಂಡ ಮೇಲೆ ಚಲಿಸಿ ಜ್ವಾಲಕ ಅಥವಾ ವಿದ್ಯುತ್ ಒಲೆ ಪುನಃ ಉರಿಯುವಂತೆ ಮಾಡುತ್ತದೆ. ಮತ್ತು ವ್ಯವಸ್ಥೆಯ ಉಷ್ಣತೆ ಏರುತ್ತದೆ. ನಿಯಂತ್ರಣ ದಂಡ ಕೆಳಚಲಿಸಿ ಉಷ್ಣ ಪೂರೈಕೆಯನ್ನು ಕಡಿದು ಹಾಕುತ್ತದೆ. ಹೀಗೆ ಮತ್ತೆಮತ್ತೆ ಈ ಕ್ರಿಯೆ ನಡೆದು ವ್ಯವಸ್ಥೆಯಲ್ಲಿನ ಉಷ್ಣತೆ ನಿಯಂತ್ರಿಸಲ್ಪಡುತ್ತದೆ. ಇಂಥ ತಾಪಸ್ಥಾಪಿಗಳನ್ನು 0o ಅ ನಿಂದ 100o ಅ ಯ ಉಷ್ಣತೆಯಲ್ಲಿ ಬಳಸಲಾಗುವುದು. 

ಚಿತ್ರ-2

	3 ಎಲೆಕ್ಟ್ರಾನಿಕ್ ತಾಪಸ್ಥಾಪಿ: ರೋಧದ ಉಷ್ಣತಾ ಗುಣಾಂಕ ತತ್ತ್ವವನ್ನು ಆಧರಿಸಿಯೂ ತಾಪಸ್ಥಾಪಿಗಳನ್ನು ರಚಿಸಿ ಬಳಸಲಾಗುತ್ತಿದೆ. ಇಂಥ ಮಾದರಿಯಲ್ಲಿ ಹೆಚ್ಚು ಉಷ್ಣತಾಗುಣಾಂಕವಿರುವ ಒಂದು ರೋಧವನ್ನು ವೀಟ್‍ಸ್ಟೋನ್ ಮಂಡಲದ ಒಂದು ಬಾಹುವಿಗೆ ಜೋಡಿಸಿರುತ್ತದೆ. ಬೇರೆ ಮೂರು ರೋಧಗಳು ಅತಿ ಕಡಿಮೆ ಉಷ್ಣತಾ ಗುಣಾಂಕವಿರುವಂಥವು. ಸಾಮಾನ್ಯ ಉಷ್ಣತೆಯಲ್ಲಿ ವೀಟ್‍ಸ್ಟೋನ್ ಮಂಡಲ ಸಮತೋಲ ಸ್ಥಿತಿಯಲ್ಲಿ ಇರುವಂತೆ ಅಳವಡಿಸಿರುತ್ತದೆ. ಹೆಚ್ಚು ಉಷ್ಣತಾಗುಣಾಂಕವಿರುವ ರೋಧವನ್ನು ವ್ಯವಸ್ಥೆಯಲ್ಲಿ ಮುಳುಗಿಸಿರುತ್ತದೆ. ವ್ಯವಸ್ಥೆಯನ್ನು ವಿದ್ಯುತ್ ಒಲೆಯ ಸಹಾಯದಿಂದ ಕಾಸಿದಾಗ ಉಷ್ಣತೆ ಹೆಚ್ಚಿ ರೋಧದ ರೋಧತೆ ಬದಲಾಗುವುದು. ಆಗ ವೀಟ್‍ಸ್ಟೋನ್ ಮಂಡಲದ ಸಮತೋಲ ಸ್ಥಿತಿಯಲ್ಲಿ ಏರುಪೇರಾಗುತ್ತದೆ. ಹೀಗಾದಾಗ ಮಂಡಲದಲ್ಲಿ ಬಳಸಿರುವ ತೂಗು ಸುರುಳಿ ಗ್ಯಾಲ್ವನಮೀಟರಿನ ಮೂಲಕ ವಿದ್ಯುತ್ ಹರಿದು ಸುರುಳಿ ದಿಕ್ಪಲ್ಲಟಗೊಳ್ಳತ್ತದೆ. ಅನಂತರ ಈ ಗ್ಯಾಲ್ವನ ಮೀಟರಿಗೆ ಹೊಂದಿಕೊಂಡಂತಿರುವ ದೀಪ, ದರ್ಪಣ ಮತ್ತು ದ್ಯುತಿಕೋಶ ವ್ಯವಸ್ಥೆ ವಿದ್ಯುತ್ತನ್ನು ಉತ್ಪತ್ತಿ ಮಾಡುತ್ತದೆ. ಇದನ್ನು ವಿದ್ಯುತ್ ಟಪ್ಪೆಯ (ಎಲೆಕ್ಟ್ರಿಕ್ ರಿಲೆ) ಮೂಲಕ ಹಾಯಿಸಿದಾಗ ಟಪ್ಪೆ ವ್ಯವಸ್ಥೆಗೆ ಉಷ್ಣವನ್ನು ಒದಗಿಸುತ್ತಿರುವ ಒಲೆಯ ವಿದ್ಯುತ್ ಸಂಪರ್ಕವನ್ನು ಕಡಿದು ಹಾಕುತ್ತದೆ. ಅನಂತರ ಉಷ್ಣತೆ ಕಡಿಮೆಯಾಗುತ್ತ ಹೋಗುತ್ತದೆ. ವ್ಯವಸ್ಥೆ ನಿಯಮಿತ ಉಷ್ಣತೆಯನ್ನು ತಲಪಿದಾಗ ವೀಟ್‍ಸ್ಟೋನ್ ಮಂಡಲ ಸಮತೋಲ ಸ್ಥಿತಿಯನ್ನು ತಲುಪುತ್ತದೆ. ಆಗ ಟಪ್ಪೆ ಒಲೆಗೆ ವಿದ್ಯುತ್ ಸರಬರಾಜು ಪುನಃ ಸ್ಥಾಪಿತವಾಗುವಂತೆ ಮಾಡುತ್ತದೆ. ಹೀಗೆ ಪುನಃ ಪುನಃ ವಿದ್ಯುತ್ ಸಂಪರ್ಕ, ಕಡಿತ ಉಂಟಾಗಿ ವ್ಯವಸ್ಥೆಯ ಉಷ್ಣತೆ ನಿಯಂತ್ರಿಸಲ್ಪಡುತ್ತದೆ. ಇಲ್ಲಿ ಗ್ರಾಹ್ಯವಸ್ತು ರೋಧ ಮತ್ತು ನಿಯಂತ್ರಣ ವಸ್ತು ವಿದ್ಯುತ್ ಟಪ್ಪೆ ಎಂಬುದನ್ನು ಗಮನಿಸಬಹುದು. 
 
	ಉಷ್ಣತಾಂತರ ಯುಗ್ಮ (ಥರ್ಮೋಕಪಲ್), ಪ್ರವರ್ಧಕ ಮತ್ತು ವಿದ್ಯುತ್ ಟಪ್ಪೆಗಳನ್ನು ಅಳವಡಿಸಿಯೂ ತಾಪಸ್ಥಾಪಿಗಳನ್ನು ತಯಾರಿಸಲಾಗುವುದು. 
ತಾಪಸ್ಥಾಪಿಗಳನ್ನು ಅವುಗಳ ರಚನೆಗೆ ಅನುಗುಣವಾಗಿ ಬೇರೆ ಬೇರೆ ವ್ಯವಸ್ಥೆಗಳ ಉಷ್ಣತೆಯನ್ನು ನಿಯತವಾಗಿಡಲು ಬಳಸಲಾಗುವುದು. ದ್ವಿಲೋಹ ಪಟ್ಟಿ ತಾಪಸ್ಥಾಪಿಗಳನ್ನು ಬಾಯ್ಲರ್ ಮುಳುಗು ಒಲೆ, ವಿದ್ಯುತ್ ಒಲೆ, ಕುಲುಮೆಗಳಲ್ಲಿಯೂ ದ್ರವ ತಾಪಸ್ಥಾಪಿಗಳನ್ನು ಶೀತಕಯಂತ್ರಗಳಲ್ಲಿಯೂ (ರೆಫ್ರಿಜರೇಟರ್) ಎಲೆಕ್ಟ್ರಾನಿಕ್ ತಾಪಸ್ಥಾಪಿಗಳನ್ನು ವಿದ್ಯುತ್ ಒಲೆ, ಕುಲುಮೆ, ಅಗ್ಗಿಷ್ಟಕೆ ಮುಂತಾದವುಗಳಲ್ಲಿಯೂ ಬಳಸುವರು. 							(ಸಿ.ಟಿ.ಎಸ್)
ಪರಿಷ್ಕರಣೆ : ಹೆಚ್.ಆರ್.ಆರ್.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ